ಇನ್ನೇನು ಮಳೆಗಾಲ ಆರಂಭವಾಗಿಯೇ ಬಿಟ್ಟಿತು. ಮನೆಯಿಂದ ಹೊರಗೆ ಕಾಲಿಡುವುದೂ ಕಷ್ಟ. ಮಳೆಗೆ ನಾವು ತಬ್ಬುವವರೆಗು ಮನೆಯಲ್ಲೇ ಕುಳಿತು ಕಾಲ ಕಳೆಯಲು ಯೋಚಿಸುತ್ತೇವೆ. ನಮ್ಮ ಕೈಲಿ ಆಗದ್ದನ್ನು ಹಪಾಪಿಸಿ ಗೊಣಗಿಕೊಳ್ಳುತ್ತೇವೆ. ಆದರೂ ಪರಿಸ್ಥಿತಿ ನಮ್ಮನ್ನು ಜಡಿಮಳೆಯಲ್ಲೇ ನಿಲ್ಲಿಸುತ್ತದೆ…
ಹೌದಲ್ಲ! ನಮ್ಮ ಮುತ್ತಜ್ಜ, ಅಜ್ಜ, ನಮ್ಮಪ್ಪ ಹೀಗಿರಲಿಲ್ಲ. ಮಳೆ, ಹನಿ ಹತ್ತುವುದಕ್ಕೂ ಮೊದಲೇ ಬೀಜ ಹುಡುಕುತ್ತಿದ್ದ, ಮಣ್ಣು ಹಸನು ಮಾಡುತ್ತಿದ್ದ. ಭೂಮಿಗೆ ಎಷ್ಟು ಬೇಕೋ ಅಷ್ಟು ಗೊಬ್ಬರ, ಸೊಪ್ಪು, ಸುಡುಮಣ್ಣು ಮಾಡುತ್ತಿದ್ದ. ಆಮೇಲೆ ಕಂಬಳಿಕೊಪ್ಪೆಗೆ ದಬ್ಬಣ ಏರಿಸಿ ಎತ್ತು ಕೋಣಗಳ ಬಾಲ ತಿರುವುತ್ತಿದ್ದ. ಅವ್ವ ಅಪ್ಪನಿಗೆ ಧ್ವನಿಯಾಗಿ ನಳ್ಳಿ, ಕೊರಡು, ನೊಗ, ಕಣ್ಣಿಗಳನ್ನು ಹೊರುತ್ತಿದ್ದಳು. ನಮ್ಮ ಗೊಣ್ಣೆ ಹಿಡಿದ ಮೂಗುಗಳು, ಹರಿದ ಅಂಗಿ ತೋಳಿಗೋ, ಲಂಗದ ಚುಂಗಿಗೋ ಅಂಟಿಕೊಂಡು ಶಾಲೆಯ ಹೊಸ್ತಿಲು ಮರಳಿ ಹತ್ತುವುದಕ್ಕೆ ಅಣಿಯಾಗುತ್ತಿದ್ದವು…
ಇಷ್ಟರಲ್ಲೇ, ಧೋ….. ಎನ್ನುತ್ತಿದ್ದ ಇಳೆಗೆ ಅಪ್ಪ ಅವ್ವ ಇಬ್ಬರೂ ಚಿತ್ತಾರ ಬರೆಯುತ್ತಿದ್ದರು. ಒಂದಾರು ತಿಂಗಳಲ್ಲೇ ಅಪ್ಪ ಅವ್ವನ ಅಷ್ಟೂ ನೋವುಗಳನ್ನು ಮರೆಸುವಷ್ಟು, ಭೂರಮೆ ಸ್ವರ್ಗಕ್ಕೇ ಕಿಚ್ಚು ಹಚ್ಚುವಂತೆ ಸಂತಸವನ್ನು ಆವರಿಸುತ್ತಿತ್ತು.ಕಾರಣ,
ಅಪ್ಪ ಮತ್ತು ಅವ್ವ ತಮ್ಮ ಕರ್ತವ್ಯವನ್ನು ಅಷ್ಟು ಅಚ್ಚುಕಟ್ಟಾಗಿ, ಜೋಪಾನವಾಗಿ ಮಾಡಿರುತ್ತಿದ್ದರು.
ಇತ್ತ, ಶಾಲೆಯಲ್ಲಿ ಮೇಷ್ಟ್ರು ಶಾಲೆ ಕಡೆ ಕಣ್ಣೆತ್ತಿಯೂ ನೋಡದ ಅಪ್ಪ ಅವ್ವನನ್ನು ಕ್ಯಾರೇ ಅನ್ನದೆ ನಮ್ಮನ್ನೂ ಹೊಡೆದು, ಬಡಿದು, ತಿದ್ದಿ, ತೀಡಿ ಮುಂದಿನ ಫಸಲಿಗೆ ಹದಗೊಳಿಸುತ್ತಿದ್ದರು.
ಆದರೆ, ಇಂದು!?
ಬೀಜವೆಲ್ಲೋ, ಗೊಬ್ಬರವೆಲ್ಲೋ, ಕೆಲವೊಮ್ಮೆ ನಮ್ಮ ಭೂಮೆಯೇ ಎಲ್ಲೊ ಅನ್ನುವಷ್ಟು ನಮ್ಮ ಮಮ್ಮಿ ಡ್ಯಾಡಿ ಬ್ಯುಸಿ – ಒತ್ತಡದಲ್ಲಿದ್ದಾರೆ. ಮಕ್ಕಳೂ ಎಂಬ ಭೂಮಿಯನ್ನು ಹದಗೊಳಿಸುವುದಕ್ಕೆ, ತಮ್ಮನ್ನು ತಾವೇ ಆತ್ಮರತಿಯ ಸ್ವರ್ಗ ಕಾಣುವುದಕ್ಕೆ, ಮಕ್ಕಳಿಗಾಗಿ ಆಧುನಿಕತೆಯ ಪರಮಾಣು ಶಾಲೆ ಗಳನ್ನು ಹುಡುಕುತ್ತಿದ್ದಾರೆ…
(ನಾಳೆಗೆ ಮುಂದುವರೆಯುತ್ತದೆ…)
ಮಂಜುನಾಥ್ ಎಸ್. ಬ್ಯಾಣದ
(ಬರಹಗಾರರು : ಶಿಕ್ಷಣ ತಜ್ಞ, ಪತ್ರಕರ್ತ, ರಂಗ ಕರ್ಮಿಗಳು )
